English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Haggai Chapters

1 ಪರ್ಶಿಯಾದ ರಾಜನಾದ ದಾರ್ಯಾವೆಷನ ಆಳ್ವಿಕೆಯ ಎರಡನೇ ವರ್ಷದ ಆರನೇ ತಿಂಗಳಿನ ಮೊದಲನೇ ದಿನದಲ್ಲಿ ಹಗ್ಗಾಯನಿಗೆ ಯೆಹೋವನಿಂದ ಸಂದೇಶವು ಬಂದಿತು. ಈ ಸಂದೇಶವು ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲನಿಗೋಸ್ಕರ, ಯೆಹೋಚಾದಾಕನ ಮಗನಾದ ಯೆಹೋಶುವನಿಗೋಸ್ಕರ ಬಂದಿತು. ಜೆರುಬ್ಬಾಬೆಲನು ಯೆಹೂದ ಪ್ರಾಂತ್ಯದ ರಾಜ್ಯಪಾಲನಾಗಿದ್ದನು; ಯೆಹೋಶುವನು ಪ್ರಧಾನ ಯಾಜಕನಾಗಿದ್ದನು. ಸಂದೇಶವು ಇದೇ:
2 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಆಲಯವನ್ನು ಕಟ್ಟಲು ಇದು ಸರಿಯಾದ ಸಮಯವಲ್ಲವೆಂದು ಜನರು ಹೇಳುತ್ತಿದ್ದಾರೆ.”
3 ಹಗ್ಗಾಯನಿಗೆ ಮತ್ತೆ ಯೆಹೋವನಿಂದ ಸಂದೇಶವು ಬಂದಿತು. ಹಗ್ಗಾಯನು ಈ ಸಂದೇಶವನ್ನು ತಿಳಿಸಿದನು:
4 “ಜನರೇ, ನೀವು ಅಂದವಾದ ಮನೆಗಳಲ್ಲಿ ವಾಸಮಾಡಲು ಇದು ತಕ್ಕ ಸಮಯವೆಂದು ಹೇಳುತ್ತೀರಿ. ನಿಮ್ಮ ಮನೆಗಳಲ್ಲಿ ಗೋಡೆಗೆ ಮರದ ಹಲಗೆಗಳನ್ನು ಹೊಡೆದಿದ್ದೀರಿ. ಆದರೆ ಯೆಹೋವನ ಮನೆಯು ಇನ್ನೂ ಹಾಳುಬಿದ್ದಿದೆ.
5 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, ‘ಏನು ನಡೆಯುತ್ತಿದೆಂಬುದರ ಬಗ್ಗೆ ಯೋಚಿಸಿರಿ.
6 ನೀವು ಬಹಳ ಬೀಜವನ್ನು ಭೂಮಿಯಲ್ಲಿ ಬಿತ್ತಿದ್ದರೂ ಸ್ವಲ್ಪವೇ ಪೈರನ್ನು ಕೊಯ್ದಿದ್ದೀರಿ. ನಿಮಗೆ ಊಟಮಾಡಲು ಆಹಾರವಿದ್ದರೂ ತೃಪ್ತಿಯಾಗುವಷ್ಟಿಲ್ಲ. ನಿಮ್ಮಲ್ಲಿ ಕುಡಿಯಲು ಸ್ವಲ್ಪ ಪಾನೀಯವಿದ್ದರೂ ಕುಡಿದು ಅಮಲೇರುವಷ್ಟು ಇಲ್ಲ. ನಿಮ್ಮಲ್ಲಿ ತೊಟ್ಟುಕೊಳ್ಳಲು ಸ್ವಲ್ಪ ಬಟ್ಟೆಯಿದ್ದರೂ ನಿಮ್ಮನ್ನು ಬೆಚ್ಚಗಿಟ್ಟುಕೊಳ್ಳುವಷ್ಟು ಇಲ್ಲ. ನೀವು ಸ್ವಲ್ಪ ಹಣ ಸಂಪಾದನೆ ಮಾಡಿದರೂ ಅದು ಹೇಗೆ ಖರ್ಚಾಗುತ್ತದೋ ನಿಮಗೆ ತಿಳಿಯುವುದಿಲ್ಲ. ನಿಮ್ಮ ಜೇಬಿಗೆ ರಂಧ್ರ ಇದೆಯೋ ಎಂಬಂತೆ ಅದು ಖರ್ಚಾಗುತ್ತದೆ.’ ”
7 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನೀವು ಮಾಡುತ್ತಿರುವುದನ್ನು ಯೋಚಿಸಿರಿ!
8 ಬೆಟ್ಟಗಳ ಮೇಲಕ್ಕೆ ಹೋಗಿ ಮರವನ್ನು ತಂದು ನನಗೆ ಆಲಯವನ್ನು ಕಟ್ಟಿರಿ. ಆಗ ನಾನು ನನ್ನ ನಿವಾಸದಲ್ಲಿ ಸಂತೋಷಿಸುವೆನು. ಆಗ ನಾನು ಗೌರವಿಸಲ್ಪಡುವೆನು.” ಯೆಹೋವನು ಈ ಸಂಗತಿಗಳನ್ನು ಹೇಳಿದ್ದಾನೆ.
9 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನೀವು ದೊಡ್ಡ ಸುಗ್ಗಿಯನ್ನು ಎದುರು ನೋಡುತ್ತಿದ್ದೀರಿ. ಆದರೆ ನೀವು ಪೈರು ಕೊಯ್ಯಲು ಹೋಗುವಾಗ ಸ್ಪಲ್ಪವೇ ಕಾಳು ಇರುವುದು. ಅದನ್ನು ನೀವು ಮನೆಗೆ ತಂದಾಗ ನಾನು ಗಾಳಿಯನ್ನು ಕಳುಹಿಸಿ ಅವುಗಳನ್ನು ಹಾರಿಸಿಬಿಡುವೆನು. ಹೀಗೆಲ್ಲಾ ಯಾಕೆ ಆಗುತ್ತಿದೆ? ಯಾಕೆಂದರೆ, ನನ್ನ ಆಲಯವು ಇನ್ನೂ ಹಾಳುಬಿದ್ದಿದ್ದರೂ ನೀವೆಲ್ಲರೂ ನಿಮ್ಮ ನಿಮ್ಮ ಮನೆಗಳನ್ನು ನೋಡಿಕೊಳ್ಳುವುದಕ್ಕಾಗಿ ಓಡಿಹೋಗುತ್ತೀರಿ.
10 ಅದಕ್ಕಾಗಿಯೇ ಆಕಾಶವು ಮಂಜನ್ನು ಸುರಿಸುವುದಿಲ್ಲ. ಭೂಮಿಯು ಪೈರನ್ನು ಬೆಳೆಸುವದಿಲ್ಲ.”
11 ಯೆಹೋವನು ಹೇಳುವುದೇನೆಂದರೆ, “ನಾನು ಭೂಮಿಗೂ ಪರ್ವತಗಳಿಗೂ ಒಣಗಿಹೋಗಲು ಆಜ್ಞಾಪಿಸಿದ್ದೇನೆ. ಬೆಳೆ, ಹೊಸ ದ್ರಾಕ್ಷಾರಸ, ಆಲೀವ್ ಎಣ್ಣೆ ಮತ್ತು ಭೂಮಿಯು ಫಲಿಸುವ ಯಾವ ವಸ್ತುವಾಗಲಿ ನಾಶವಾಗುವುದು. ಮತ್ತು ಎಲ್ಲಾ ಮನುಷ್ಯರೂ ಬಲಹೀನರಾಗುವರು; ಪ್ರಾಣಿಗಳೂ ಬಲಹೀನವಾಗುವವು.”
12 ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲನಿಗೂ ಯೆಹೋಚಾದಾಕನ ಮಗನೂ ಪ್ರಧಾನಯಾಜಕನೂ ಆದ ಯೆಹೋಶುವನಿಗೂ ಸಂದೇಶವನ್ನು ಕೊಡಲು ದೇವರಾದ ಯೆಹೋವನು ಹಗ್ಗಾಯನನ್ನು ಕಳುಹಿಸಿದನು. ಆದ್ದರಿಂದ ಇವರು ಮತ್ತು ಎಲ್ಲಾ ಜನರು ತಮ್ಮ ದೇವರಾದ ಯೆಹೋವನ ಸ್ವರವನ್ನು ಮತ್ತು ಪ್ರವಾದಿಯಾದ ಹಗ್ಗಾಯನ ಮಾತುಗಳನ್ನು ಕೇಳಿದರು ಮತ್ತು ತಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾದರು.
13 ದೇವರು ತನ್ನ ಈ ಸಂದೇಶವನ್ನು ಜನರಿಗೆ ತಲುಪಿಸುವಂತೆ ಹಗ್ಗಾಯನನ್ನು ಉಪಯೋಗಿಸಿದನು. ಯೆಹೋವನು ಹೀಗೆನ್ನುತ್ತಾನೆ, “ನಾನು ನಿಮ್ಮೊಂದಿಗಿದ್ದೇನೆ.”
14 ಬಳಿಕ ದೇವರಾದ ಯೆಹೋವನು ಆಲಯವನ್ನು ಕಟ್ಟುವಂತೆ ಜನರನ್ನು ಪ್ರೇರೇಪಿಸಿದನು. ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲನು ಯೆಹೂದ ಪ್ರಾಂತ್ಯದ ರಾಜ್ಯಪಾಲನಾಗಿದ್ದನು. ಯೆಹೋವನು ಅವನನ್ನು ಪ್ರೇರೇಪಿಸಿದನು. ಯೆಹೋಚಾದಾಕನ ಮಗನಾದ ಯೆಹೋಶುವನು ಪ್ರಧಾನ ಯಾಜಕನಾಗಿದ್ದನು. ಯೆಹೋವನು ಅವನನ್ನು ಪ್ರೇರೇಪಿಸಿದನು ಅಲ್ಲದೆ ಯೆಹೋವನು ಆಲಯವನ್ನು ಕಟ್ಟಲು ಎಲ್ಲಾ ಜನರನ್ನು ಪ್ರೋತ್ಸಾಹಿಸಿದನು. ಆದ್ದರಿಂದ ಅವರೆಲ್ಲರೂ ತಮ್ಮ ದೇವರಾದ ಯೆಹೋವನಿಗೆ ಆಲಯವನ್ನು ಕಟ್ಟಲು ಪ್ರಾರಂಭಿಸಿದರು.
15 ಪರ್ಶಿಯಾದ ರಾಜನಾದ ದಾರ್ಯಾವೆಷನ ಆಳ್ವಿಕೆಯ ಎರಡನೇ ವರ್ಷದ ಆರನೇ ತಿಂಗಳಿನ ಇಪ್ಪತ್ನಾಲ್ಕನೆಯ ದಿವಸದಲ್ಲಿ ಕಟ್ಟುವ ಕಾರ್ಯವನ್ನು ಪ್ರಾರಂಭಿಸಿದರು.

Haggai Chapters

×

Alert

×